ಜೀವಂತಿಗೆ -
ಆರ್ಕಿಡೆಸೀ ಕುಟುಂಬದ ಮೊನಾಂಡ್ರಿ ಉಪಕುಟುಂಬಕ್ಕೆ ಸೇರಿದ ಒಂದು ಅಪ್ಪುಸಸ್ಯ.  ವ್ಯಾಂಡ ಇದರ ಶಾಸ್ತ್ರೀಯ ಹೆಸರು.  ಇದರಲ್ಲಿ 20ಕ್ಕಿಂತಲೂ ಹೆಚ್ಚು ಪ್ರಭೇದಗಳಿವೆ.  ಇವುಗಳಲ್ಲಿ ಕೆಲವನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುವುದುಂಟು.  ಇದರ ತವರು ಏಷ್ಯ.  ಚೀನದಿಂದ ಹಿಮಾಲಯ ಶ್ರೀಲಂಕಾಗಳವರೆಗೆ ಆಗ್ನೇಯ ಏಷ್ಯದ ಭಾಗಗಳಲ್ಲೆಲ್ಲಾ ಸ್ವಾಭಾವಿಕವಾಗಿ ಬೆಳೆಯುತ್ತದೆ.  ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಮರಗಳರೆಂಬೆಗಳ ಮೇಲೆ ಅಪ್ಪುಗಿಡವಾಗಿ ಬೆಳೆಯುವ ಇದರ ಕಾಂಡ ನೇರವಾಗಿ, ಉದ್ದವಾಗಿ ಹತ್ತಾರು ದಿಕ್ಕುಗಳಲ್ಲಿ ಪಸರಿಸಿ ಬೆಳೆಯುತ್ತದೆ.  ಕಾಂಡದ ಉದ್ದಕೂ ಬೇರುಗಳುಂಟು. ಸುತ್ತಣ ತೇವಭರಿತ ವಾತಾವರಣದಿಂದ ತೇವವನ್ನು ಹೀರಿಕೊಳ್ಳುವ ಸಾಮಥ್ರ್ಯ ಬೇರುಗಳಿಗಿದೆ.  ಎಲೆಗಳು ಚರ್ಮಿಲವಾಗಿಯೂ ಉದ್ದ ಪಟ್ಟೆಯಂತೆಯೂ ಇವೆ. ಹೂಗಳು ದೊಡ್ಡ ಗಾತ್ರದವು; ಅವುಗಳ ಬಣ್ಣ ನೇರಿಳೆ, ಹಳದಿ, ನೀಲಿ - ಹೀಗೆ ವರ್ಣರಂಜಿತ.  ಅರಳಿದ ಮೇಲೆ ಅನೇಕ ದಿವಸಗಳ ವರೆಗೆ ಬಾಡದೆ ಉಳಿಯುವುದು ಇವುಗಳ ವಿಶೇಷ ಲಕ್ಷಣ. ಹೂಗಳು ಅಸಮಮಿತಿಯುಳ್ಳವು ಹಾಗೂ ಅತ್ಯಂತ ಸಂಕೀರ್ಣ ಬಗೆಯ ರಚನೆಯುಳ್ಳವು.  ಪ್ರತಿ ಹೂವಿನಲ್ಲಿ ಹೊರಬಾಗಿದಂಥ ಪುಷ್ಪಪತ್ರ ಮತ್ತು ದಳಗಳ ಒಂಟಿ ಕೇಸರ ಮತ್ತು ಅಂಡಾಶಯದಿಂದ ರಚಿತವಾದ ಕಾಲಮ್ ಎಂಬ ರಚನೆಯೂ ಇವೆ.  ಕೇಸರದ ಪರಾಗಕೋಶದಲ್ಲಿ 1 ಅಥವಾ 2 ಪಾಲಿಗಳಿವೆ.  ಫಲ ಸಂಪುಟ ಮಾದರಿಯದು.  ಬೀಜಗಳು ಅಸಂಖ್ಯ ಹಾಗೂ ಅತಿ ಚಿಕ್ಕ ಗಾತ್ರದವು.
(ಎ.ಕೆ.ಕೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ